ಗುರುವಾರ, ಮಾರ್ಚ್ 17, 2011

ಸಂಧಿ

ಸಂಧಿ :- ಎಂದರೇ ಸಂಸ್ಕೃತದಲ್ಲಿ ಕೂಡಿಕೆ /ಕಲೆತ ಎಂದರ್ಥ .ವ್ಯಾಕರಣದಲ್ಲಿ ಎರಡು ಒರೆ ( ಪದ ) ಗಳನ್ನು ಕೂಡಿಸಿ /ಸೇರಿಸಿ/ಕಲೆಸಿ ಒಂದು ಒರೆ (ಪದ)ವನ್ನಾಗಿ ಮಾಡಿದರೆಅದು ಸಂಧಿ /ಕೂಡಿಕೆ ಯಾಗುವುದು . ಕನ್ನಡದಲ್ಲಿ ಅದನ್ನು “ ಒರೆಗೂಡಿಕೆ ”.ಎಂದು ಕರೆಯಬಹುದು.
ಒರೆಗೂಡಿಕೆಯಾಗುವಾಗ ಒಂದು ಸದ್ದಗೆ(ಅಕ್ಕರ) ಬಿಟ್ಟು ಹೋಗಬಹುದು, ಇಲ್ಲವೆ ಸೇರಬಹುದು, ಇಲ್ಲವೆ ಆ ಸದ್ದಗೆಯ ಜಾಗದಲ್ಲಿ ಬೇರೆ ಸದ್ದಗೆ ಬರಬಹುದು.
ಒರೆಗೂಡಿಕೆಯನ್ನು ತೋರಿಸಲು ಬರೆಯಲು ಸಮಾನಾರ್ಥಕ /ಒಟ್ಟು(=) ಮತ್ತು ಸಂಕಲನ/ಕೂಡು (+) ಗುರುತುಗಳನ್ನು ಬಳಸುತ್ತಾರೆ. '=' ಮತ್ತು '+' ಗುರುತುಗಳನ್ನು ಬಳಸಿ, ಮೇಲಿನ ಉದಾಹರಣೆಗಳನ್ನು ಹೀಗೆ ಬರೆಯಲಾಗುವುದು.
ಮನದ + ಆಳ = ಮನದಾಳ
ಮರದ + ಎಲೆ = ಎರದೆಲೆ
ಮನೆ + ಕೆಲಸ = ಮನೆಗೆಲಸ
ಹೆರ್ + ದಾರಿ = ಹೆದ್ದಾರಿ
ಕನ್ನಡ ನುಡಿಯಲ್ಲಿ ಬಹಳಷ್ಟು ಸಂಸ್ಕೃತದ ಪದಗಳು ಬರೆತಿಯುವರಿಂದ ಕನ್ನಡ ವ್ಯಾಕರಣದಲ್ಲಿ ಸಂಸ್ಕೃತದ ಸಂಧಿಗಳನ್ನು ಸೇರಿಸಲಾಗಿದೆ. ಆದುದರಿಂದ ಸಂಧಿಗಳಲ್ಲಿ ಪ್ರಮುಖವಾಗಿ ಎರಡು ವಿಧಗಳು. ಕನ್ನಡ ಸಂಧಿಗಳು ಮತ್ತು ಸಂಸ್ಕೃತ ಸಂಧಿಗಳು .
ಗಮನಿಸಿರಿ :-
ಒಂದು ಕನ್ನಡದ ಒರೆ, ಒಂದು ಸಂಸ್ಕೃತಪದವನ್ನು ಸೇರದರೆ ಅಲ್ಲಿ ಯಾವಾಗಲು ಕನ್ನಡಸಂಧಿಯ ನಿಯಮಗಳನ್ನು ಪಾಲಿಸುತ್ತಾರೆ.
ಉದಾಹರಣೆಗೆ :-
ಹಿಂ + ಪಾಲಕ =ಹಿಂಬಾಲಕ ( ಆದೇಶ ಕನ್ನಡ ಸಂಧಿ )
ಇರ್ + ಭಾಗ = ಇಬ್ಬಾಗ ( ಆದೇಶ ಕನ್ನಡ ಸಂಧಿ )
ಕನ್ನಡ ಸಂಧಿಗಳು :-
ಲೋಪ ಸಂಧಿ :-
ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಪೂರ್ವಪದದ ಕೊನೆಯ ಸ್ವರವು ಲೋಪವಾಗುವುದು. ಉದಾ:- ಮತ್ತು(ಉ)+ಒಬ್ಬ=ಮತ್ತೊಬ್ಬ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಉ' ಕಾರ ಲೋಪವಾಗಿದೆ
ಉದಾ:- ಅಲ್ಲಿ(ಇ)+ಅಲ್ಲಿ=ಅಲ್ಲಲ್ಲಿ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಇ'ಕಾರ ಲೋಪವಾಗಿದೆ.
ಗಮನಿಸಿರಿ :-
ಇಲ್ಲಿ "ಅರ್ಥವು ಕೆಡದಿದ್ದ ಪಕ್ಷದಲ್ಲಿ" ಎಂದು ಕೇಳುವಾಗ, ಸಂಧಿ ಮಾಡುವವರು ಅರ್ಥ ಕೆಡುವುದೇ ಇಲ್ಲವೇ ಎಂದು ಹೇಳಲು ಹಲವು ಸರತಿ ಆಗುವುದಿಲ್ಲ.
ಮಾದರಿ: ಬಾಳನ್ನು = ಬಾಳೆ + ಅನ್ನು ? ಇಲ್ಲವೆ ಬಾಳು + ಅನ್ನು ? . ಒಂದು ವೇಳೆ ಬಾಳೆ + ಅನ್ನು = ಬಾಳನ್ನು ಅಂದರೆ ಇಲ್ಲಿ ಅರ್ಥ ಹೇಗೆ ಕಟ್ಟಿದೆ, ಹೇಳಲು ಸಾಧ್ಯವಿಲ್ಲ . ಆದುದರಿಂದ ಇಂತಹ ಹಲವು ಸನ್ನಿವೇಶಗಳಲ್ಲಿ ರೂಢಿಯಲ್ಲಿ ಇರುವ ಅರ್ಥವೇ ಸರಿಯೆಂದು ತಿಳಿವು. ಹಾಗೆ
ಬಾಲೆ + ಅನ್ನು = ಬಾಲನ್ನು ಎಂದು ತಿಳಿವು . ಆದರೆ ಬಾಲನ್ನು =ಬಾಲು + ಅನ್ನು ಎಂದೇ ರೂಡಿ.
ಆಗಮ ಸಂಧಿ :- ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ,ಸಾಮಾನ್ಯವಾಗಿ ಹೊಸದಾಗಿ ಒಂದು ವ್ಯಂಜನವು ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು. ಸೇರುತ್ತದೆ.ಇದರಲ್ಲಿ ಎರಡು ವಿಧ.'ಯಕಾರಾಗಮ ಸಂಧಿ' ಹಾಗೂ 'ವಕಾರಾಗಮ ಸಂಧಿ'.
ಉದಾ:- ಮನೆ(ಎ)+ಅನ್ನು=ಮನೆಯನ್ನು.ಇಲ್ಲಿ ಉತ್ತರಪದದ ಆದಿಯಲ್ಲಿ 'ಯ್ ಕಾರ' 'ಆಗಮ'ವಾಗಿದೆ.
ಉದಾ:- ಮಗು(ಉ)+ಇಗೆ=ಮಗುವಿಗೆ.ಇಲ್ಲಿ ಉತ್ತರಪದದ ಆದಿಯಲ್ಲಿ 'ವ್ ಕಾರ' 'ಆಗಮ'ವಾಗಿದೆ.
ಗಮನಿಸಿರಿ :- ಕನ್ನಡದ ಹಲವಾರು ವ್ಯಾಕರಣದ ಹೊತ್ತಗೆಗಳು ಮೇಲಂತೆ ಹೇಳಿದರೂ, ಹೀಗೆ ಹೇಳುವದು ಹಲವು ವಿವಾದಗಳಿಗೆ ಮತ್ತು ತಪ್ಪುತಿಳಿವಿಗೆ ಅನುವು ಮಾಡುವುದು.
ಈ ಸಂಧಿಯ ವಿವರಣೆಯಲ್ಲಿ ಇರುವಂತೆ "ಸಾಮಾನ್ಯವಾಗಿ ಹೊಸದಾಗಿ ಒಂದು ವ್ಯಂಜನವು ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ . ಎಂದಾಗ ಆ ಸಮಾನ್ಯವಲ್ಲದ( ಅಸಮಾನ್ಯ ) ಸನ್ನಿವೇಶಗಳು ಯಾವುವು ಎಂದು ಯಾವ ಹೊತ್ತಗೆಗಳು ಹೇಳುವುದಿಲ್ಲ.
ಮನೆ + ಅನ್ನು = ಮನೆಗಳನ್ನು ಏಕೆ ಆಗಬಾರದು? "ಗಳ್" ಯಾಕೆ ಆಗಮವಾಗಬಾರದು? ಹಾಗೆ
ಮಗು + ಅನ್ನು = ಮಗುವನ್ನು ಆದರೆ ನೀರು + ಅನ್ನು = ನೀರುವನ್ನು ಏಕೆ ತಪ್ಪು ?
ಮನೆ + ಅನ್ನು = ಮನೆಯನ್ನು ಆದರೆ ಆದರೆ + ಇಲ್ಲಿ = ಆದರೆಯಿಲ್ಲ ಏಕೆ ಆಗದೇ, ಆದರಿಲ್ಲಿ ಆಗುವುದು ?
ಹೀಗೆ ಇನ್ನು ಹಲವು ವಿಚಾರಗಳಿಗೆ ಕಾರಣವನ್ನು ಕೊಡಲು ಆಗದು .
ಅದಕ್ಕೆ ಕೆಲವರು ಕನ್ನಡದಲ್ಲಿ "ಆಗಮಸಂಧಿ" ಎನ್ನವ ಸಂಧಿಯಿಲ್ಲ. ಕನ್ನಡದಲ್ಲಿ "ಲೋಪ ಸಂಧಿ" ಯೊಂದೆ ಸ್ವರ ಸಂಧಿ ಎನ್ನುವರು. ಜತೆಗೆ ಅವರು "ಆಗಮಸಂಧಿ"ಗೆ ಉದಾಹರಣೆಯಾಗಿ ಹೇಳಿರುವ ಪದಗಳನ್ನು ಬಿಡಿಸಲು ಬೇರೆ ಬಗೆಯನ್ನು ಕೂಡ ಸೂಚಿಸಿರುವರು .
ಮೆನಯು + ಅನ್ನು = ಮೆನೆಯನ್ನು; ಉ ಕಾರ ಲೋಪ. "ಮನೆಯು => ಒಂದು ಮನೆ" ಮನೆಗಳು + ಅನ್ನು = ಮನೆಗಳನ್ನು :ಉ ಕಾರ ಲೋಪ; "ಮನೆಗಳು => ಹಲವು ಮನೆಗಳು.
ಮಗುವು + ಅನ್ನು = ಮಗುವನ್ನು ; ಉ ಕಾರ ಲೋಪ
ಆದೇಶ ಸಂಧಿ :- ಸಂಧಿಯಾಗುವಾಗ ಸ್ವರದ ಮುಂದೆ ಕ,ತ,ಪ ಗಳು ಬಂದಾಗ ,ಅದೇ ವರ್ಗದ ಮೂರನೇ ವ್ಯಂಜನಗಳು ಅಂದರೆ ಗ,ದ,ಬ ಗಳು ಆದೇಶವಾಗಿ ಬರುತ್ತವೆ.
ಉದಾ:- ಮಳೆ+ಕಾಲ=ಮಳೆಗಾಲ., ಬೆಟ್ಟ+ತಾವರೆ=ಬೆಟ್ಟದಾವರೆ., ಅಡಿ+ಪವಳ=ಅಡಿಬವಳ
ಗಮನಿಸಿರಿ: ಈ ನಿಯಮವು ಕನ್ನಡದಲ್ಲಿ ಬರುವ ಹಲವು ವ್ಯಂಜನದ ಆದೇಶಗಳನ್ನು ವಿವರಿಸುವುದಿಲ್ಲ. ಅವನ್ನು ವಿವರಿಸಲು ಯಾವ ಸಂಧಿನಿಯಮವನ್ನು ಹಲವು ವ್ಯಾಕರಣದ ಹೊತ್ತಗೆಗಳು ಹೇಳುವುದಿಲ್ಲ .
ಮಾದರಿ :-
ಹೆರ್ + ದಾರಿ =ಹೆದ್ದಾರಿ
ಬೆಲೆ + ಪೆಣ್ಣು ( ಹೆಣ್ಣು ) ಬೆಲೆವೆಣ್ಣು
ಮುಂದು + ಪರಿ ( ಹರಿ ) = ಮುಂದುವರಿ
ಮುಂದು + ಪರೆ ( ಹರೆ ) ಮುಂದುವರೆ
ತಣ್ + ನೀರು = ತಣ್ಣೀರು
ಕಣ್ + ನೀರು = ಕಣ್ಣೀರು
ಭೂ + ತಾಯಿ =ಭೂದಾಯಿ ಅಲ್ಲ ಏಕೆ ?
ಒರ್ + ಕೊರಲು = ಒಕ್ಕೊರಲು
ಒರ್ + ಕೂಟ = ಒಕ್ಕೂಟ
ಒರ್ + ಕೂಡು =ಒಗ್ಗೂಡು
ಹೆರ್ + ಪಾವು ( ಹಾವು ) = ಹೆಬ್ಬಾವು
ಕಿಸು +ಪೊಲಲು ( ಹೊಳಲು ) = ಕಿಸುವೊಳಲು
ಮೂರ್ + ಕಣ್ಣ = ಮುಕ್ಕಣ
ತಣ್ + ಗಾಳಿ = ತಂಗಾಳಿ , ಇಲ್ಲಿ “ಣ್” ಕಾರಕ್ಕೆ “ ಞ್” ಕಾರ ಆದೇಶ
ಗಮನಿಸಿರಿ: ಕನ್ನಡದಲ್ಲಿ ಹೆಚ್ಚ ಸರತಿ ಬರಿ ರೂಢಿಯಿಂದ ಸಂಧಿ/ಒರೆಗೂಡಿಕೆಗಳನ್ನು ಅರಿಯಲು ಆರುವುದು. ಈ ಮೇಲಿನ ನಿಯಮಗಳಂತೆ ಎಲ್ಲ ಕನ್ನಡ ಸಂಧಿಪದಗಳನ್ನು ಬಿಡಿಸಲು ಆರದು .
ಸಂಸ್ಕೃತ ಸಂಧಿಗಳು :- ಯಾವ ಕನ್ನಡದ ಪಲುಕು(ಪದ) ಈ ಕೆಳಗಿನ ಸಂಧಿಗಳಲ್ಲಿ ಬರುವುದಿಲ್ಲ. ಬರೀ ಸಂಸ್ಕೃತದ ಪಲುಕುಗಳಿಗೆ ಸೀಮಿತವಾದ ಸಂಧಿಗಳಿವು. ಆದರೆ ಹಳೆಗನ್ನಡದಿಂದಲೂ ಕನ್ನಡದಲ್ಲಿ ಹೇರಳವಾಗಿ ಬೆರೆತಿರುವ ಸಾವಿರಾರು ಸಂಸ್ಕೃತದ ಸಂಧಿಪದಗಳನ್ನು ತಿಳಿಯಲು ಈ ಸಂಧಿಗಳ ಅರಿವು ಬೇಕು. ಈ ಸಂಧಿಗಳ ವಿವರಣೆಯನ್ನು ಸಂಸ್ಕೃತದ ವ್ಯಾಕರಣದ ಹೊತ್ತಗೆಗಳಿಂದ ಪಡೆಯಬಹುದು. ಈ ಎಲ್ಲ ಸಂಧಿಗಳೂ ೧೦೦% ಸಂಸ್ಕೃತದ ವ್ಯಾಕರಣದ ಸಂಧಿನಿಯಮಗಳನ್ನೇ ಪಾಲಿಸುವುವು .
ಸವರ್ಣದೀರ್ಘ ಸಂಧಿ :- ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ - ಇವುಗಳಿಗೆ 'ಸವರ್ಣ'ಗಳೆಂದು ಹೆಸರು. ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು .
ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.
ಸಂಸ್ಕೃತದಲ್ಲಿ ಪಾಣಿನೀಯ ಸೂತ್ರ : 'ಅಕಃ ಸವರ್ಣೇ ದೀರ್ಘಃ' ಎಂದು.
ಉದಾಹರಣಿಗೆ :-
ಅ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಇ + ಇ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಉ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಆ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಇ + ಈ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಊ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಉದಾಹರಣಿಗೆ :-
ಕೃತ + ಅರ್ಥ = ಕೃತಾರ್ಥ ( ಅ + ಅ = ಆ )
ಶಚಿ + ಇಂದ್ರ = ಶಚೀಂದ್ರ ( ಇ + ಇ = ಈ )
ಬಹು + ಉದಕ = ಬಹೂದಕ ( ಉ + ಉ = ಊ )
ವಿದ್ಯಾ + ಅಭ್ಯಾಸ = ವಿದ್ಯಾಭ್ಯಾಸ ( ಆ + ಅ = ಆ )
ಸತೀ + ಈಶ = ಸತೀಶ ( ಈ + ಈ = ಈ)
ಉಪ + ಆಹಾರ = ಉಪಹಾರ ( ಅ + ಆ = ಆ)
ಗುಣಸಂಧಿ :-
1. ಅ,ಆ + ಇ,ಈ ಸ್ವರಗಳು ಸಂಧಿಯಾಗಿ, 'ಏ' ಸ್ವರವಾಗಿ ಉಳಿಯುತ್ತದೆ.
2. ಅ,ಆ + ಉ,ಊ ಸ್ವರಗಳು ಸಂಧಿಯಾಗಿ, 'ಓ' ಸ್ವರವಾಗಿ ಉಳಿಯುತ್ತದೆ.
3. ಅ,ಆ + ಋ ಸ್ವರಗಳು ಸಂಧಿಯಾಗಿ, 'ಅರ್' ಎಂದು ಉಳಿಯುತ್ತದೆ.
ಉದಾಹರಣಿಗಳು :-
ರಾಜ + ಇಂದ್ರ = ರಾಜೇಂದ್ರ ( ಅ + ಇ = ಏ )
ಜನ್ಮ + ಉತ್ಸವ = ಜನ್ಮೋತ್ಸವ ( ಅ + ಉ = ಓ)
ದೇವ + ಋಷಿ = ದೇವರ್ಷಿ (ಅ + ಋ = ಅರ್ )
ರಮಾ + ಈಶ = ರಮೇಶ (ಆ + ಈ = ಏ )
ಮಹಾ + ಉತ್ಸವ = ಮಹೋತ್ಸವ ( ಆ + ಉ = ಓ )
ವೃದ್ಧಿ ಸಂಧಿ :- ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಐ' ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಔ' ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿ ಸಂಧಿಯೆನ್ನುವರು.
ಉದಾಹರಣಿಗೆ :-
ಲೋಕ + ಏಕವೀರ = ಲೋಕೈಕವೀರ
ಜನ + ಐಕ್ಯ = ಜನೈಕ್ಯ
ಯಣ್ ಸಂಧಿ :- ಸಂಧಿ ರಚನೆಯಲ್ಲಿ 'ಯ' 'ರ' 'ಲ' 'ವ' ಈ ನಾಲ್ಕು ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ. ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ, ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ . ಇದಕ್ಕೆ 'ಯಣ್ ಸಂಧಿ'ಯೆನ್ನುತ್ತೇವೆ.
ಉದಾಹರಣಿಗೆ :-
ಅತಿ + ಅಂತ = ಅತ್ಯಂತ
ಮನು + ಅಂತರ = ಮನ್ವಂತರ
ಪಿತೃ + ಅರ್ಜಿತ = ಪಿತ್ರಾರ್ಜಿತ
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯಾತೀತ
ಕೋಟಿ + ಅಧೀಶ = ಕೋಟ್ಯಾಧೀಶ
ಜಸ್ತ್ವ ಸಂಧಿ :- ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಮೂರನೆಯ ಅಕ್ಷರ ಬಂದಾಗ ಜಸ್ತ್ವ ಸಂಧಿ ಆಗುತ್ತದೆ. ಪೂವ೯ಪದದ ಕೊನೆಯಲ್ಲಿರುವ ಪ್ರಥಮ ವಣ೯ಗಳಿಗೆ ಅಂದರೆ ಕ,ಚ,ಟ,ತ,ಪ ಗಳಿಗೆ ಇತರೆ ವಣ೯ಗಳು ಪರವಾದರೆ ಅವುಗಳ ಸ್ತಾನದಲ್ಲಿ ಅದೇ ವಗ೯ದ ಮೂರನೆಯ ವಣ೯ವು ಆದೇಶವಾಗುತ್ತದೆ .
ಉದಾಹರಣಿಗೆ :-
ವಾಕ್ + ಈಶ = ವಾಗೀಶ
ಜಗತ್ + ಗುರು = ಜಗದ್ಗುರು
ದಿಕ್ + ದೇಶ = ದಿಗ್ದೇಶ
ಸತ್ + ಉದ್ಯೋಗ = ಸದುದ್ಯೋಗ
ಶ್ಚುತ್ವ ಸಂಧಿ :- 'ಸ' ಕಾರ 'ತ' ವಗಾ೯ಕ್ಷರಗಳಿಗೆ 'ಶ' ಕಾರ 'ಚ' ವಗಾ೯ಕ್ಷರಗಳು ಪರವಾದಾಗ 'ಸ' ಕಾರಕ್ಕೆ 'ಶ' ಕಾರವೂ 'ತ' ವಗ೯ಕ್ಕೆ 'ಚ' ವಗ೯ವೂ ಆದೇಶವಾಗಿ ಬರುತ್ತದೆ.
ಉದಾಹರಣಿಗೆ :-
ಮನಸ್ + ಶುದ್ದಿ =ಮನಶ್ಯುದ್ದಿ
ಜಗತ್ +ಜ್ಯೋತಿ =ಜಗಜ್ಯೋತಿ
ಸತ್ + ಜನ = ಸಜ್ಜನ
ಷ್ಟುತ್ವ ಸಂಧಿ :- 'ಷ್ಟು' ಎಂದರೆ 'ಷ' ಕಾರ 'ಟ' ವಗ೯ ಎಂದು ಸಂಙೆ ಪದಾಂತ್ಯದಲ್ಲಿರುವ 'ಸ' ಕಾರ 'ತ' ವಗ೯ಗಳಿಗೆ 'ಷ' ಕಾರ 'ಟ' ವಗ೯ಗಳು ಪರವಾದರೆ 'ಸ' ಕಾರಕ್ಕೆ 'ಷ' ಕಾರವೂ 'ತ' ವಗ೯ಕ್ಕೆ 'ಟ' ವಗ೯ವೂ ಆದೇಶವಾಗುವುದು ಇದು ಷ್ಟುತ್ವ ಸಂಧಿ.
ಉದಾಹರಣಿಗೆ :-
ತಪಸ್ + ಪಡಂಶ = ತಪಷ್ಪಡಂಶ
ತತ್ + ಟೀಕೆ = ತಟ್ಟೀಕೆ
ಅನುನಾಸಿಕ ಸಂಧಿ :- ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಕೊನೆಯ ಅಕ್ಷರ (ಅನುನಾಸಿಕ) ಬಂದಾಗ ಅನುನಾಸಿಕ ಸಂಧಿ ಆಗುತ್ತದೆ.
ಉದಾಹರಣಿಗೆ :-
ವಾಕ್ + ಮಯ = ವಾಙ್ಮಯ
ಜಗತ್ + ಮಾತಾ = ಜಗನ್ಮಾತಾ
ಷಟ್ಪದಿ :- ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ. ಪಾದಗಳ ಗಣ/ಮಾತ್ರಾ/ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಷಟ್ಪದಿಗಳಿವೆ. ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸುಕೊಳ್ಳುತ್ತದೆ. ಇದರ ೧, ೨, ೪ ಮತ್ತು ೫ನೇ ಪಾದಗಳು ಪರಸ್ಪರ ಸಮನಾಗಿರುತ್ತದೆ.೩ನೆಯ ಮತ್ತು ೬ನೆಯ ಪಾದಗಳು ಪರಸ್ಪರ ಸಮನಾಗಿರುತ್ತವೆ. ೩ನೆಯ ಪಾದ ೧ನೆಯ ಪಾದದ ಒಂದೂವರೆಯಷ್ಟಿದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ .